೫೦ ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವ ಸೌ|| ಕಮಲಾಬಾಯಿ ಪಿಕಳೆ ಹೈಸ್ಕೂಲ ಕತಗಾಲ ಈ ವರ್ಷ ಸುವರ್ಣಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವೇ ಸರಿ. ಶ್ರೀ ಜಿ.ಎನ್.ಶೇಟ ಇವರ ಮುಂದಾಳತ್ವದಲ್ಲಿ ಶ್ರೀ ಈಶ್ವರ ಆರ್ ದೇಸಾಯಿ, ತಿಮ್ಮಣ್ಣ ಕೃಷ್ಣ ಹೆಗಡೆ, ಕೃಷ್ಣ ಹರಿ ಶಾನಭಾಗ ಪರಮೇಶ್ವರ ನಾರಾಯಣ ಹೆಗಡೆ, ಪರಮೇಶ್ವರ ಈಶ್ವರ ಭಟ್ಟ ನಾರಾಯಣ ಗಣಪಯ್ಯ ಶೇಟ, ಕೆ.ಜಿ.ನಾಯ್ಕ, ನರಸಿಂಹ ಈಶ್ವರ ಹೆಬ್ಬಾರ ಮುಂತಾದ ಹಿರಿಯರ ಪ್ರರಿಶ್ರಮದಿದಾಗಿ ೧೯೬೬ ಜೂನ ತಿಂಗಳಿನಲ್ಲಿ ಜನತಾ ವಿದ್ಯಾಲಯ ಎಂಬ ಅಭಿದಾನದೊಂದಿಗೆ ಶ್ರೀ ಶಂಭುಲಿಂಗ ದೇವಸ್ಥಾನದ ಚಂದ್ರಶಾಲೆಯಲ್ಲಿ ಆರಂಭಗೊಂಡಿತು.

ಊರಿನವರ ಕಾಯಾ ವಾಚಾ ಮನಸಾ ಸಹಕಾರದೊಂದಿಗೆ ಆರಂಭವಾದರೂ ಮುಂದೆ ಹಣಕಾಸಿನ ಸಮಸ್ಯೆ ತಲೆದೋರಿದಾಗ ಬೆನ್ನೆಲುಬಾಗಿ ನಿಂತ ಶ್ರೀ ಎಸ್.ವಿ.ಪಿಕಳೆ ಅಡ್ವೋಕೇಟ ಇವರ ಸೇವೆ ಹಾಗೂ ಅಭಿಪ್ರಾಯಕ್ಕೆ ಮನ್ನಣೆಯಿತ್ತು ಶ್ರೀ ಪಿಕಳೆಯವರ ತಾಯಿಯವರ ನಾಮಾಭಿದಾನದೊಂದಿಗೆ ದಿನಾಂಕ-೧-೧೨-೧೯೬೬ ರಂದು ಡಾ|| ದಿನಕರ ದೇಸಾಯಿಯವರ ಕೆನರಾ ವೆಲ್‌ಫೆರ ಟ್ರಸ್ಟ ಈ ಶಾಲೆಯನ್ನು ವಹಿಸಿಕೊಂಡಿತು.

ಆರಂಭದಲ್ಲಿ ಕೇವಲ ೭೪ ವಿದ್ಯಾರ್ಥಿಗಳಿಂದ ಆರಂಭಿಸಲ್ಪಟ್ಟ ಈ ಶಾಲೆ ಇಂದು ಎರಡು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಕ್ಕರೆಯಿಂದ ಶಿಕ್ಷಣವನ್ನು ನೀಡುತ್ತಿದೆ.

ಒಂದು ಕಾಲದಲ್ಲಿ ದಟ್ಟ ಅರಣ್ಯದಿಂದ ಆವೃತವಾಗಿದ್ದ ಕತಗಾಲ ಇಂದು ಜನ ಚಟುವಟಿಕೆಯಿಂದ ಕೂಡಿದ ನಗರವಾಗಿ ಬೆಳೆಯುತ್ತಿದ್ದು ಈ ಬೆಳವಣಿಗೆಯೊಡನೆ ಸಂವಾದಿಯಾಗಿ ನಮ್ಮ ಪ್ರೌಢಶಾಲೆಯು ಅಭಿವೃದ್ದಿಯತ್ತ ದಾಂಗುಡಿಯುತ್ತಿದೆ.

ಒಬ್ಬ ವ್ಯಕ್ತಿಯ ಜೀವನದಂತೆ ಸಂಸ್ಥೆಯ ಜಿವನದಲ್ಲಿ ಕೂಡ ೫೦ ವರ್ಷ ಮಹತ್ವಪೂರ್ಣ ಅವಧಿಯೇ ಸರಿ. ಈ ಅವಧಿಯಲ್ಲಿ ನಮ್ಮ ನಿಷ್ಠಾವಂತ, ಅರ್ಹ ಶಿಕ್ಷಕರ ಅನುಭವದಿಂದ ಸನ್ನಡತೆಯ ಉತ್ತಮ ವಿದ್ಯಾರ್ಥಿಗಳನ್ನು ಸಂಸ್ಥೆ ನೀಡಿದೆ. ಇಲ್ಲಿ ಕಲಿತ ಮಕ್ಕಳು ಇಂದು ಜಗತ್ತಿನಲ್ಲಡೆ ಸತ್ಪ್ರಜೆಗಳಾಗಿ ಸಮಾಜಕ್ಕೆ ಬೇಕಾಗಿ, ಬೆಳಕಾಗಿ ಬೆಳೆಯುತ್ತಿರುವ ಸಂಗತಿಯೇ ನಮ್ಮ ಪಾಲಿನ ಅನವರತ ಚಿಮ್ಮುವ ಸಂತಸದ ಚಿಲುಮೆಯಾಗಿದೆ.

ಈವರೆಗೆ ಅದ್ವಿತೀಯವಾದ ಸೇವೆಸಲ್ಲಿಸುತ್ತಾ ಈ ಭಾಗದ ಅಕ್ಷರದ ಬದುಕಿಗೆ ಬೆಳಕಿನ ಕೈ ದೀವಿಗೆಯಾಗಿ ನಿಂತು ಬೆಳೆದ ಈ ವಿದ್ಯಾಲಯದ ಬೆಳವಣಿಗೆಯಲ್ಲಿ ಈವರೆಗಿನ ಎಲ್ಲ  ಶಾಲಾಭಿವೃದ್ದಿ ಸಮಿತಿಯ ಪದಾಧಿಕಾರಿಗಳು ತಮ್ಮ ಮನೆಯ ಮಗುವೆಂದು ಪಾಲನೆ ಪೋಷಣೆ ಮಾಡಿದ್ದು ಸ್ತುತ್ಯರ್ಹವಾದುದು. ಅಂತೆಯೇ ಕತಗಾಲ ಹಾಗೂ ಸುತ್ತಲಿನ  ಊರಿನ ಎಲ್ಲ ನಾಗರಿಕರೂ ಕೂಡಾ ಸಂಸ್ಥೆಗಾಗಿ ತನು ಮನ ಧನದಿಂದ ದುಡಿದಿದ್ದಾರೆ. ಆ ಎಲ್ಲರ ಬೆವರ ಹನಿಗಳು ಇಂದು ಸುವರ್ಣ ಮುತ್ತುಗಳಾಗಿ, ಸ್ವರ್ಣ ಸಂಭ್ರಮಕ್ಕೆ ಸಾಕ್ಷಿಯಾಗಿದೆ ಎಂದರೆ ಖಂಡಿತ ಉತ್ಪ್ರೇಕ್ಷೆಯಾಗಲಾರದು.

ಹೀಗೆ ಎಲ್ಲರ ನೆರವಿನಿಂದ ಈಗಾಗಲೇ ಎಷ್ಟೋ ಅಗತ್ಯಗಳು ಪೂರೈಸಲ್ಪಟ್ಟರೂ ಅಭಿವೃದ್ದಿಯ ಪಥದಲ್ಲಿ ಹೂಸ ಹೂಸ ಪ್ರಕ್ರಿಯೆ, ಸಿದ್ದತೆಗಳು ಅನಿವಾರ್ಯ. ನಮ್ಮ ಮಾತೃ ಸಂಸ್ಥೆಯ ಧರ್ಮದರ್ಶಿಗಳು ಹಾಗೂ ದೂರದರ್ಶಿ ಕ್ರಿಯಾಶೀಲ ವ್ಯಕ್ತಿತ್ವವುಳ್ಳ ಅಧ್ಯಕ್ಷರಾದ ಶ್ರೀ ಎಸ್.ಪಿ. ಕಾಮತರವರು ಮತ್ತು ದಕ್ಷ ಹಾಗೂ ಸಂವೇದನಾಶೀಲ ವ್ಯಕ್ತಿತ್ವವುಳ್ಳ ಆಡಳಿತಾಧಿಕಾರಿಗಳಾದ ಶ್ರೀ ಕೆ.ವಿ. ಶೆಟ್ಟಿಯವರು ಅಭಿವೃದ್ಧಿಯ ನಿರಂತರ ಪ್ರಕ್ರಿಯೆಯೊಂದಿಗೆ ನಮ್ಮನ್ನು ಪ್ರೋತ್ಸಾಹಿಸುತ್ತ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಮುಂಚೂಣಿಯಲ್ಲಿ ನಿಂತು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಎಲ್ಲಾ ದಾನಿಗಳ, ಶಿಕ್ಷಣಾಭಿಮಾನಿಗಳ, ಸಹೃದಯರ ಸಹಕಾರದೊಂದಿಗೆ ಮುನ್ನೆಡೆಯುತ್ತಿರುವ ನಮ್ಮ ಈ ಪ್ರೌಢಶಾಲೆ ಇಂದು ಚಿನ್ನದ ಹಬ್ಬದ ಹೊಸ್ತಿಲಲ್ಲಿದೆ. ಈ ರೀತಿಯ ಫಲಪ್ರದ ಅಸ್ತಿತ್ವದ ಸಂದರ್ಭದಲ್ಲಿ ವರ್ಗಕೋಣೆಗಳಲ್ಲಿ ಇನ್ನೂ ಉತ್ತಮ ಶೈಕ್ಷಣಿಕ ಸವಲತ್ತುಗಳನ್ನು ಅಳವಡಿಸಿಕೊಳ್ಳಲು ಹಾಗೂ ಆರೋಗ್ಯಕರ ಆಧುನಿಕ ಅಭ್ಯಾಸಾನುಕೂಲಿ ವಾತಾವರಣ ನಿರ್ಮಾಣಕ್ಕಾಗಿ ಮೂಲಧನ ಸಂಗ್ರಹಣೆಯ ಕಾರ್ಯ ಅನಿವಾರ್ಯದ ಅಗತ್ಯವಾಗಿದೆ. ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ ಸಂಸ್ಥೆಗೆ ಸಭಾಂಗಣ  ಹಾಗೂ ಕ್ರೀಡಾಂಗಣಗಳ ವ್ಯವಸ್ತೀಕರಣಗೊಳಿಸಲು ಉದ್ದೇಶಿಸಲಾಗಿದೆ.

ಈ ಸಂದರ್ಭದಲ್ಲಿ ಸುಮನಸರಾದ ತಮ್ಮಲ್ಲಿ ಸಂಸ್ಥೆಯ ಬೆಳವಣಿಗೆಗಾಗಿ ಉದಾರ ಧನಸಹಾಯವನ್ನು ನೀಡಿ ನಮ್ಮ ಪವಿತ್ರಕಾರ್ಯಕ್ಕೆ ಕೈ ಜೋಡಿಸಲು ಬಿನ್ನಹ

ಸುವರ್ಣ ಮಹೋತ್ಸವಕ್ಕೆ ಈ ಕೆಳಗಿನ ಯಾವುದೇ ವಿಧದಲ್ಲಿ ಸಹಾಯ ಮಾಡಬಹುದು

೧. ದೇಣಿಗೆ ಮೂಲಕ

೨. ಸುವರ್ಣ ಮಹೋತ್ಸವ ಸಮಿತಿಗೆ

ಮಹಾಪೋಷಕರಾಗಿ, ಪೋಷಕರಾಗಿ, ಸದಸ್ಯರಾಗಿ ದೇಣಿಗೆ ನೀಡುವುದು.

೩. ಸಂಸ್ಮರಣ ಗ್ರಂಥಕ್ಕೆ ಜಾಹಿರಾತುಗಳನ್ನು ಒದಗಿಸುವ ಮೂಲಕ

ಅಲ್ಲದೇ ರೂ-೧,೦೦,೦೦೦/- ಅಥವಾ ಅಧಿಕ ಮೂತ್ತವನ್ನು ನೀಡುವ ಮಹನೀಯ/ಮಹಿಳೆಯರ ಹೆಸರನ್ನು ಸಂಸ್ಥೆಯ ಫಲಕದ ಮೇಲೆ  ಬರೆದಿಡಲಾಗುವುದು. ಮೇಲ್ಕಾಣಿಸಿದ ಎಲ್ಲ ರೀತಿಯ ಸಹಾಯ ಮಾಡಿದವರ ಹೆಸರನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.

ದಯವಿಟ್ಟು ತಾವು ತಮ್ಮ ದೇಣಿಗೆಯನ್ನು ಚೆಕ್/ಡಿ.ಡಿ ಮೂಲಕ ಸಿಂಡಿಕೇಟ್ ಬ್ಯಾಂಕ್ ಕತಗಾಲ ಸುವರ್ಣ ಮಹೋತ್ಸವ ಸಮಿತಿ ಖಾತೆಗೆ ಕಳುಹಿಸಿ ಉಪಕರಿಸಬೇಕಾಗಿ ವಿನಂತಿ.